ಚಿದಾನಂದಾವಧೂತ
-	   ಸು 1750. ಅದ್ವೈತ ವೇದಾಂತವನ್ನು ನಿರೂಪಿಸುವ ಜ್ಞಾನಸಿಂಧು  ಎಂಬ ಕೃತಿಯನ್ನು ಬರೆದು ಪ್ರಸಿದ್ಧನಾಗಿರುವ ಕನ್ನಡ ಕವಿ. ಇದು ಮಹಾಲಿಂಗರಂಗನ ಅನುಭವಾಮೃತವನ್ನು ಬಹುಮಟ್ಟಿಗೆ ವಸ್ತು ಹಾಗೂ ನಿರೂಪಣೆಗಳೆರಡರಲ್ಲೂ ಹೋಲುತ್ತದೆ.
ಚಿದಾನಂದಾವಧೂತ ಬ್ರಾಹ್ಮಣ ಕವಿ. ತುಂಗಭದ್ರಾ ತಟದ ಅಯೋಧ್ಯಾಪುರದ" ಚಿದಾನಂದ "ಈತನ ಗುರು. ಪಂಚೀಕರಣ, ತತ್ತ್ವಚಿಂತಾಮಣಿ, ನವಚಕ್ರಕುಲ ರೇಖಾಲಕ್ಷಣ, ದೇವೀ ಮಹಾತ್ಮ್ಯ, ಬಗಳಾಂಬಾಸ್ತೋತ್ತ್ರ, ಚಿದಾನಂದವಚನ ಮತ್ತು ಕಾಮವಿಡಂಬನ- ಇವು ಈತನ ಇತರ ಕೃತಿಗಳು .

	ಜ್ಞಾನ ಸಿಂಧು ಗ್ರಂಥದಲ್ಲಿ 49 ಅಧ್ಯಾಯಗಳಿದ್ದು 3621 ಪದ್ಯಗಳಿವೆ. ಶಿವ ಷಣ್ಮುಖನಿಗೆ ವಿವರಿಸಿದ ಆಧ್ಯಾತ್ಮ ಬೋಧೆಯೇ ಇದರ ವಸ್ತು. ವ್ಯಾಕರಣಕ್ಕೆ ವಿಶೇಷ ಗಮನ ಕೊಡದೆ ಸಾಮಾನ್ಯ ಜನತೆಗಾಗಿ ಭಾಮಿನಿಷಟ್ಪದಿಯಲ್ಲಿ ಬರೆದ ಕೃತಿ ಇದು. ಸರ್ವಶಾಸ್ತ್ರಾರ್ಥವನನ್ನನುಸಿರುವುದು ಆತ್ಮಜ್ಞಾನವನ್ನು ತಿಳಿಯುವ ದಾರಯಿನ್ನರುಹುವುದು ಕವಿಯ ಉದ್ದೇಶ. ಪಂಚೀಕರಣ ಹದಿನೈದು ವಚನಗಳ ಗದ್ಯ ಕೃತಿ. ಚಿದಾನಂದ ಸದ್ಗುರುವೇ ಎಂಬ ಅಂಕಿತದಿಂದ ಪ್ರತಿವಚನವೂ ಮುಕ್ತಾಯವಾಗುತ್ತದೆ. ಕೇಳಯ್ಯ ದೇಹ ಬೀಲು ಪೃಥ್ವಿ ಪೃಥ್ವಿಯ ಕೂಡಿತು ; ಅಪ್ಪು ಅಪ್ಪ ಕೂಡಿತು ; ತೇಜ ತೇಜವ ಕೂಡಿತು ; ವಾಯು ವಾಯುವ ಕೂಡಿತು ; ಆಕಾಶ ಆಕಾಶವ ಕೂಡಿತು ; ಪಂಚಭೂತ ತತ್ತ್ವಗಳು ಆಯಾ ಭೂತತತ್ತ್ವಂಗಳಲ್ಲಿ ಕೂಡಿದವು. ತತ್ತ್ವದ ಗುಣಂಗಳು ತತ್ತ್ವವ ಹೊಂದಿದವು. ನೀನು ಅಂಗರಹಿತನು, ನೀನು ನಿರ್ವಿಕಾರನು, ನಿರ್ವಯಲುಕಣಾ ಚಿದಾನಂದ ಸದ್ಗುರವೆ-ಎಂಬ ಇದರಲ್ಲಿನ ಒಂದು ವಚನದಿಂದ ಕವಿಯ ಮನೋಭಾವ ಸ್ಪಷ್ಟವಾಗುತ್ತದೆ. ಧ್ಯಾನಪರತತ್ವ ವಿಶ್ವವಿರಾಟ್ಪುರುಷವಿವರ, ಜೀವೇಶ್ವರೈಕ್ಯ ವಿಚಾರ, ಪ್ರಣವನಾದ ಬಿಂದುಸ್ವರೂಪ ಮತ್ತಿತರ ವಿವರಗಳು ತತ್ತ್ವ ಚಿಂತಾಮಣಿಯಲ್ಲಿವೆ. ವೇದಾಂತ ವಿಷಯವನ್ನು ತಿಳಿಸುವ ನವಚಕ್ರ ಕುಲರೇಖಾಲಕ್ಷಣದಲ್ಲಿ ಶಿವಪಾರ್ವತಿಯರ ಸಂವಾದ ಶ್ಲೋಕರೂಪದಲ್ಲಿದ್ದು ಅದರ ಟೀಕೆ ಗದ್ಯದಲ್ಲಿದೆ. ದೇವೀಮಹಾತ್ಮ್ಯ ಅದೇ ಹೆಸರಿನ ಸಂಸ್ಕøತ ಭಾಷಾಂತರ. 18 ಸಂಧಿ, 769 ಪದ್ಯಗಳನ್ನೊಳಗೊಂಡಿರುವ ಈ ಕೃತಿ ಭಾಮಿನೀ ಷಟ್ಪದಿಯಲ್ಲಿದೆ. ತನ್ನ ಗುರುವಿನ ಆಜ್ಞೆಯ ಮೇರೆಗೆ ಈ ಕೃತಿಯನ್ನು ರಚಿಸುದುದಾಗಿ ಕವಿ ಹೇಳಿಕೊಂಡಿದ್ದಾನೆ. ಬಗಳಾಂಬಾ ಸ್ತೋತ್ರದಲ್ಲಿ 101 ಪದ್ಯಗಳಿವೆ. ಹತ್ತು ಮಹಾವಿದ್ಯಾಧಿದೇವತೆಗಳಲ್ಲಿ ಒಬ್ಬಳಾದ ಬಗಳಾಂಬ ದೇವತೆಯ ಸ್ತುತಿಯೇ ಇದರ ವಸ್ತು. ಇದು ಮಾತ್ರಾಗಣಕ್ಕೆ ತಿರುಗಿದ ಛಂದೋವಸಂತ ಎಂಬ ಛಂದಸ್ಸಿನಲ್ಲಿದೆ. ಪ್ರತಿ ಪದ್ಯದ ಕೊನೆಯಲ್ಲೂ ಚಿದಾನಂದ ಎಂಬ ಅಂಕಿತವಿದೆ. ಚಿದಾನಂದವಚನದಲ್ಲಿ ರಾಗತಾಳಗಳಿಂದ ಕೂಡಿದ ಹಲವು ಹಾಡುಗಳಿವೆ. ಕಾಮ ವಿಡಂಬನದಲ್ಲಿ 110 ಪದ್ಯಗಳಿವೆ. ಇವಕ್ಕೆ ಹೋಳಿಪದಗಳು ಎಂಬ ಹೆಸರೂ ಉಂಟು. ನೀತಿ, ತತ್ತ್ವ ಇವುಗಳೇ ಇಲ್ಲಿನ ವಸ್ತು.			(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ